ಅವ್ಯಕ್ತ- ನಾಗರೇಖಾ ಗಾಂವಕರ ಕವಿತೆ
Update: 2021-07-11
Description
ವ್ಯಕ್ತಗೊಳ್ಳುತ್ತೇನೆ ನಾನು
ಅವ್ಯಕ್ತಕ್ಕೆ ತಳ್ಳುವ ಕೈಗಳ
ಕಿರುಬೆರಳ ಸಂದಿಯಲಿ ಜುಗುಳಿ
ನಕ್ಷತ್ರ ನಿಹಾರಿಕೆಗಳ
ಜೊತೆಗೂಡುತ್ತೇನೆ.
ನಿರ್ವಾತದಲ್ಲೂ ನಿರತ ಉಸಿರಾಡುತ್ತಾ
ಪದವಿನೋದ ಗಾನ ಪಾಡುತ್ತಾ
ತಿವಿಯ ಬಂದವರೆಡೆಗೆ
ನಸುನಗುತ್ತ ಪ್ರೀತಿತೆನೆ
ಕೊಯ್ಯುತ್ತೇನೆ
ಎಲ್ಲೋ ಹುಟ್ಟಿ
ಮತ್ತೆಲ್ಲೋ ಸಾಯುವ ಹಕ್ಕಿ
ಹಾರುವ ಖುಷಿಯಲ್ಲೆ
ಬದುಕಿನಂದವ ಪಾಡುವ ಪರಿ
ಕನಸುತ್ತೇನೆ.
ರಹದಾರಿಯ ಅರಿವಿಲ್ಲದೆಯೂ
ಹಾರುವ ಬಣ್ಣದ ಚಿಟ್ಟೆ
ಬೆನ್ನು ಹತ್ತಿ
ಕಾಲಬದಲಾದಂತೆ
ಬಣ್ಣ ಬದಲಾಯಿಸುವ
ಗೋಸುಂಬೆಗಳ ಅಂಟು ಜಿಹ್ವೆಯ
ಜೊಲ್ಲಿಗೆ ನಿಲುಕದೆ
ಬೆಳಕಿನೆಡೆಗೆ ಜಿಗಿಯುವ
ಹಾತೆಯಾಗುತ್ತೇನೆ
ಉರಿವ ಜ್ವಾಲೆಗೆ ಮೈ ಸುಟ್ಟುಕೊಂಡು
ಅಗ್ನಿದಿವ್ಯದ ಎದುರು ಸ್ಫುಟಗೊಳ್ಳುತ್ತೇನೆ
ಮುಕ್ತಳಾಗುತ್ತೇನೆ ನಾ ..ನು..
*ನಾಗರೇಖಾ ಗಾಂವಕರ
Comments
In Channel







